ಐಪಿಎಲ್‌ ಕ್ರಿಕೆಟ್ ಪಂದ್ಯಾಟ: ಡೆಲ್ಲಿ ಕ್ಯಾಪಿಟಲ್ಸ್‌ ಗೆ ವಾರ್ನರ್‌ ನಾಯಕ

ಐಪಿಎಲ್‌ ಕ್ರಿಕೆಟ್ ಪಂದ್ಯಾಟ: ಡೆಲ್ಲಿ ಕ್ಯಾಪಿಟಲ್ಸ್‌ ಗೆ ವಾರ್ನರ್‌ ನಾಯಕ

ಹೊಸದಿಲ್ಲಿ: ಕಾರು ಅಪಘಾತದಿಂದಾಗಿ ಗಂಭೀರವಾಗಿ ಗಾಯಗೊಂಡಿರುವ ರಿಷಬ್‌ ಪಂತ್‌ ಅವರ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಈ ಬಾರಿಯ ಐಪಿಎಲ್‌ನಲ್ಲಿ ಆಸ್ಟ್ರೇಲಿಯದ ಡೇವಿಡ್‌ ವಾರ್ನರ್‌ ಮುನ್ನಡೆಸಲಿದ್ದಾರೆ.

ಡೇವಿಡ್‌ ನಮ್ಮ ನಾಯಕರಾಗಿರುತ್ತಾರೆ ಮತ್ತು ಅಕ್ಷರ್‌ ಪಟೇಲ್‌ ಉಪನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಡೆಲ್ಲಿ ಫ್ರಾಂಚೈಸಿಯ ಸದಸ್ಯರೊಬ್ಬರು ಹೇಳಿದ್ದಾರೆ.

ಅಕ್ಷರ್‌ ಪಟೇಲ್‌ ಆಲ್‌ರೌಂಡರ್‌ ಆಗಿ ಅಮೋಘ ನಿರ್ವಹಣೆ ನೀಡುತ್ತಿದ್ದಾರೆ. ಆದರೆ ನಾಯಕರಾಗಿ ವಾರ್ನರ್‌ ಅವರಿಗಿರುವ ಅನುಭವದ ಹಿನ್ನೆಲೆಯಲ್ಲಿ ಅವರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು ವಾರ್ನರ್‌ ನೇತೃತ್ವದ ಸನ್‌ರೈಸರ್ ತಂಡವು 2016ರಲ್ಲಿ ಐಪಿಎಲ್‌ ಪ್ರಶಸ್ತಿ ಗೆದ್ದ ಸಾಧನೆ ಮಾಡಿತ್ತು. ವಾರ್ನರ್‌ 2022ರ ಐಪಿಎಲ್‌ಗೆ ಮೊದಲು ಡೆಲ್ಲಿ ತಂಡವನ್ನು ಸೇರಿದ್ದರು.

2023ರ ಐಪಿಎಲ್‌ ಕೂಟವು ಮಾರ್ಚ್‌ 31ರಂದು ಆರಂಭವಾಗಲಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನ ಪಂದ್ಯದಲ್ಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ತಂಡವು ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಎದುರಿಸಲಿದೆ. ಎ. 1ರಂದು ಲಕ್ನೋ ಸೂಪರ್‌ ಜೈಂಟ್ಸ್ ವಿರುದ್ಧ ಆಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ಅಭಿಯಾನ ಆರಂಭಿಸಲಿದೆ.